ಚಕ್ರಮುನಿ-
ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಒಂದು ಬಹುವಾರ್ಷಿಕ ಪೊದೆಸಸ್ಯ. ಒಳ್ಳೆಯ ಸೊಪ್ಪು ತರಕಾರಿ ಎಂದು ಹೆಸರಾಗಿದೆ. ಸೌರೋಪಸ್ ಆಂಡ್ರೊಗೈನಸ್ ಇದರ ವೈಜ್ಞಾನಿಕ ಹೆಸರು. ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲೆಲ್ಲ ಸ್ವಾಭಾವಿಕವಾಗಿ ಬೆಳೆಯುತ್ತದೆ. ತರಕಾರಿಯಾಗಿ ಇದನ್ನು ತೋಟಗಳಲ್ಲಿ ಬೆಳೆಸುವುದುಂಟು. ಸುಮಾರು 1.5 m  ಎತ್ತರಕ್ಕೆ ಬೆಳೆಯುವ ಗಿಡ ಇದು. ಎಲೆಗಳು ಕರಿಬೇವಿನ ಎಲೆಗಳಿದ್ದ ಹಾಗಿರುತ್ತವೆ ; ಜೋಡಣೆ ಪರ್ಯಾಯ ಮಾದರಿಯದು. ಹೂಗಳು ಏಕಲಿಂಗಿಗಳು ; ಎಲೆಗಳ ಕಂಕುಳಲ್ಲಿ ಒಂಟೊಂಟಿಯಾಗಿ ಇಲ್ಲವೆ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ ಫಲಗಳು ಸಂಪುಟ ಮಾದರಿಯವು ; ಗುಂಡಗಿವೆ, ಒಂದೊಂದರಲ್ಲೂ 6 ಬೀಜಗಳಿರುತ್ತವೆ.

ಗಿಡವನ್ನು ಕಾಂಡದ ತುಂಡುಗಳಿಂದ ವೃದ್ಧಿ ಮಾಡಬಹುದು. ಫಲವತ್ತಾದ ಮತ್ತು ಚೆನ್ನಾಗಿ ನೀರು ಬಸಿದುಹೋಗುವಂಥ ಎಲ್ಲ ತರದ ಭೂಮಿಯಲ್ಲಿಯೂ ಯಶಸ್ವಿಯಾಗಿ ಇದರ ಬೇಸಾಯ ಸಾಧ್ಯ.

ಸೀಸದ ಕಡ್ಡಿ ಗಾತ್ರದ, ಚೆನ್ನಾಗಿ ಬಲಿತ ರೆಂಬೆಗಳನ್ನು 30-45 m  ಉದ್ದದ ತುಂಡುಗಳಾಗಿ ಕತ್ತರಿಸಿ ಮರಳಿನಲ್ಲಿ ನೆಡಬೇಕು. ನೆಟ್ಟ 15-20 ದಿವಸಗಳ ಅನಂತರ ಇವು ಚಿಗುರತೊಡಗುತ್ತವೆ.  ಆಮೇಲೆ 2 ಘಣ ಅಡಿ ಅಳತೆಯ ಗುಂಡಿಗಳನ್ನು ತೆಗೆದು, ಕೆಲವು ದಿನ ಅರಲು ಬಿಟ್ಟು ಎರಡು ಮಂಕರಿ ಕೊಟ್ಟಿಗೆ ಗೊಬ್ಬರವನ್ನು ಮೇಲ್ಮಣ್ಣಿನೊಡನೆ ಮಿಶ್ರಮಾಡಿ ಗುಂಡಿಗಳಿಗೆ ತುಂಬಬೇಕು. ಅನಂತರ ಒಂದೊಂದು ಗುಂಡಿಗೂ ಎರಡು ತುಂಡುಗಳಂತೆ 20-35 m  ಅಂತರದಲ್ಲಿ 12-12 m ಆಳವಾಗಿ ನೆಡಬೇಕು.  ಮೂರು ತಿಂಗಳ ಅನಂತರ ಗಿಡಗಳು ಪೊದೆಯಾಗಿ ಕೊಯ್ಲಿಗೆ ಬರುತ್ತವೆ.  ಗಿಡಗಳು ಹೆಚ್ಚು ಉದ್ದ ಬೆಳೆಯಲು ಬಿಡದೆ ಜುಲೈ-ಆಗಸ್ಟ್ ತಿಂಗಳಿನ ವೇಳೆಗೆ ಅದನ್ನು ಸಮರಿ ಗಿಡ ಒಂದಕ್ಕೆ 1-2 ಬುಟ್ಟಿ ಕೊಟ್ಟಿಗೆ ಗೊಬ್ಬರ, ಒಂದು ಞg. ಮೀನುಗೊಬ್ಬರ ಮತ್ತು 100-150 gm.  ರಾಸಾಯನಿಕ ಗೊಬ್ಬರಗಳ ಮಿಶ್ರಣವನ್ನು ಗಿಡದ ಬುಡದಿಂದ ಒಂದು ಅಡಿ ದೂರದಲ್ಲಿ ಸುತ್ತಲೂ ಹಾಕಿ ಮಣ್ಣನ್ನು ಕೆದಕಿ ನೀರು ಹಾಯಿಸಬೇಕು.  ಗಿಡಗಳನ್ನು ಹದವರಿತು ಸಮರುವುದರಿಂದಲೂ ಕಾಲಕ್ಕೆ ಸರಿಯಾಗಿ ಗೊಬ್ಬರ ಮತ್ತು ನೀರನ್ನು ಹಾಕುವುದರಿಂದಲೂ ಸೊಪ್ಪನ್ನು ವರ್ಷಪೂರ್ತಿ ಪಡೆಯಬಹುದು. ಒಂದು ಸಲಕ್ಕೆ ಒಂದು ಗಿಡದಿಂದ ಸರಾಸರಿ 2-3 ಞg. ಸೊಪ್ಪಿನಂತೆ 15-20 ವರ್ಷಕಾಲ ಪಡೆಯಬಹುದು.
(ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ